ಗ್ರಾಫ್, ಆರ್ಟುರೊ -
1848 - 1913. ಇಟಾಲಿಯನ್ ಕವಿ. ಅಥೆನ್ಸ್‍ನಲ್ಲಿ ಹುಟ್ಟಿದನಾದರೂ ಈತನ ಪೂರ್ವಜರು ಜರ್ಮನರು. ನೇಪಲ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ 1882 ರಲ್ಲಿ ರೋಮಿನಲ್ಲಿ ಇಟಾಲಿಯನ್ ಸಾಹಿತ್ಯದ ಉಪನ್ಯಾಸಕನಾಗಿ ನಿಂತ. ಅನಂತರ ಟ್ಯೂರಿನಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ (1876 - 1913). ಕವಿ ಲೇಯಪಾರ್ಡೀಯಂತೆ ಈತನೂ ತೀವ್ರ ನಿರಾಶಾವಾದಿ. ಆತನನ್ನು ಕುರಿತು ಈತ ಕೆಲವು ಉತ್ತಮ ಲೇಖನಗಳನ್ನು ಬರೆದಿದ್ದಾನೆ.

ಈತನ ಕಾವ್ಯಗಳು ಅನೇಕ ಸಂಪುಟಗಳಲ್ಲಿ ಪ್ರಕಟವಾಗಿವೆ. ಈತ ಹಲಕೆಲವು ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಕಾವ್ಯಾಂಶವೇ ಪ್ರಧಾನವಾಗಿದೆ. ಈತನ ಕೃತಿಗಳು ಆ ಶತಮಾನದ ಭಾವಗೀತ ಸಾಹಿತ್ಯದಲ್ಲಿ ಉನ್ನತಸ್ಥಾನ ಪಡೆದಿವೆ. 1915 ರಲ್ಲಿ ಪೊಯೆಸಿ ಎಂಬ ಹೆಸರಿನ ಈತನ ಆಯ್ದ ಕವನಗಳು ಪ್ರಕಟಗೊಂಡಿವೆ. ಟ್ಯೂರಿನಿನಲ್ಲಿ ಈತ ಕಾಲವಾದ.	    (ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ